ವಿಚಾರಸಂಕಿರಣ ಹಾಗು ಸಂವಾದ

ಮಾರ್ಚ್ 11, 2009 - Leave a Response

೧೪-೩-೨೦೦೯ರ ಶನಿವಾರ ಬೆಳಿಗ್ಗೆ ೧೦ರಿಂದ ಸಂಜೆ೫ರವರೆಗೆ ಸಕಲೇಶಪುರದ ಆಶ್ರಿತ ಹೋಟೆಲ್ ಹಾಲ್‌ನಲ್ಲಿ.
ಸಂಕಿರಣದ ಉದ್ಘಾಟನೆ ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕ ರಾಜಪ್ಪ ದಳವಾಯಿ. ಅಧ್ಯಕ್ಷತೆ- ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಸಾದ್ ರಕ್ಷಿದಿ
ಮುಖ್ಯ ಅತಿಥಿಗಳು: ಸಮಾಜಶಾಸ್ತ್ರಜ್ಞ ಡಾ.ಸಿ.ಜಿ.ಲಕ್ಷ್ಮಿಪತಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ನಾಡ್ ಮಹಮೂಬ್ ಪಾಷ.
ಮಧ್ಯಾಹ್ನದ ಗೋಷ್ಠಿ ಅಧ್ಯಕ್ಷತೆ: ರೈತ ಮುಖಂಡ ಎಂ.ಬಿ.ಮುಳ್ಳಯ್ಯ. ಮುಖ್ಯ ಅತಿಥಿಗಳು: ಮೂಡುಬಿದರೆಯ ಚಿಂತಕ-ಸಾಹಿತಿ ಅರವಿಂದ ಚೊಕ್ಕಾಡಿ, ಪತ್ರಕರ್ತರಾದ ಲಕ್ಷ್ಮಣ್ ಹೂಗಾರ್, ದಿನೇಶ್ ಕುಮಾರ್ ಎಸ್.ಸಿ.
ಸಂವಾದದಲ್ಲಿ ರೈತ, ಕಾರ್ಮಿಕ. ದಲಿತ, ಕನ್ನಡಪರ ಮತ್ತಿತರ ಚಳವಳಿಗಳ ನೂರಾರು ಸಂಗಾತಿಗಳು ಪಾಲ್ಗೊಳ್ಳುವರು.

ಆಹ್ವಾನ ಪತ್ರಿಕೆ ಇಲ್ಲಿದೆ. ಎಲ್ಲರಿಗೂ ಪ್ರೀತಿಯ ಸ್ವಾಗತ

samvada-1

samvada[/caption]

ಆಸೆ

ಅಕ್ಟೋಬರ್ 20, 2008 - One Response

ಕವಿ ಲಕ್ಷ್ಮಣ್ ಗೊತ್ತಲ್ಲ? ಜನಪರ ಕವಿ ಲಕ್ಷ್ಮಣ್ ಎಲ್ಲ ಪ್ರಗತಿಪರ ಹೋರಾಟಗಳಲ್ಲೂ ಮುಂಚೂಣಿಯಲ್ಲಿರುತ್ತಾರೆ.  ಮನುಷ್ಯಪರವಾಗಿ ಧ್ವನಿಯೆತ್ತುವ ಎಲ್ಲರ ಒಡನಾಡಿ ಅವರು. ಹಾಗಾಗಿ ಅವರನ್ನು ಎಲ್ಲರೂ ಲಕ್ಷ್ಮಣ್ ಜಿ ಎಂದೇ ಕರೆಯುತ್ತಾರೆ. ಲಕ್ಷ್ಮಣ್ ಜಾತಿ ವಿನಾಶ ವೇದಿಕೆಯ ರಾಜ್ಯಾಧ್ಯಕ್ಷರೂ ಹೌದು. ಅವರ ಸಂಭೋಳಿ ಕೃತಿ ಕನ್ನಡದ ಮಹತ್ವದ ಆತ್ಮಕಥನಗಳಲ್ಲಿ ಒಂದು. ಈಗಾಗಲೇ ಅದು ಹಲವು ಭಾಷೆಗಳಿಗೆ ಅನುವಾದವಾಗಿದೆ. ತಲ್ಲಣ ಹುಟ್ಟಿಸುವಂತೆ ಕವಿತೆ ಬರೆಯುವ ಲಕ್ಷ್ಮಣ್ ಅವರ ಆಸೆ ಎಂಬ ಕವಿತೆ ಇಲ್ಲಿದೆ. ಇದು ಸೆ.೧೫ರ ಅಭಿಮನ್ಯು ಸಂಚಿಕೆಯಲ್ಲಿ ಪ್ರಕಟವಾಗಿದೆ.

ಆಸೆ

ಹಾಲಿಲ್ಲದೆ
ಹಸುಳೆಗಳು
ಉಸಿರು ಕಳೆದುಕೊಳ್ಳುತ್ತಿರುವಾಗ

ಕಲ್ಲು
ಖನಿಜ
ಮೂರ್ತಿಗಳಿಗೆ

ಹಾಲಿಂದ
ಅಭಿಷೇಕ ಮಾಡುವವರ
ಕೊರಳು ಕೊಯ್ಯುವಾಸೆ

ಹಸುಳೆಗಳ
ಗೋರಿಗಳಿಗೆ
ರಕ್ತದ ಅಭಿಷೇಕ
ಮಾಡುವಾಸೆ

-ಲಕ್ಷ್ಮಣ್

ಅಖಂಡ ನೆಲವೇ ನನ್ನ ಮಾತೃಭೂಮಿ

ಅಕ್ಟೋಬರ್ 17, 2008 - 5 Responses

ಅಗ್ನಿ ಪತ್ರಿಕೆ ಹತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ ಹೊರಬಂದ ವಿಶೇಷಾಂಕದಲ್ಲಿ ಕವಿ ಬಿ.ಪೀರ್ ಭಾಷ ಅವರ ಕವಿತೆ ಪ್ರಕಟಗೊಂಡಿದೆ. ಅಖಂಡ ನೆಲವೇ ನನ್ನ ಮಾತೃಭೂಮಿ ಎಂಬುದು ಕವಿತೆಯ ಶೀರ್ಷಿಕೆ.
ಕವಿ ಹುಸಿ ರಾಷ್ಟ್ರೀಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಲೇ ಅಖಂಡ ಭೂಮಂಡಲವೇ ನನ್ನ ಮಾತೃಭೂಮಿ ಎನ್ನುತ್ತಾರೆ.
ಪೀರ್ ಭಾಷಾ ಅವರ ಕವಿತೆ ಇಂಡಿಯಾದ ಒಟ್ಟು ವ್ಯವಸ್ಥೆಯ ಸೋಗಲಾಡಿತನವನ್ನು ಬಯಲಿಗೆಳೆಯುತ್ತದೆ.
ಭಾಷಾ ಅವರ ಈ ಕವಿತೆಯನ್ನು ಅರಗಿಸಿಕೊಳ್ಳುವುದು ಬಹಳಷ್ಟು ಜನರಿಗೆ ಕಷ್ಟವೆನಿಸಬಹುದು. ಆದರೆ ಕಟುಸತ್ಯಗಳನ್ನು ಹರಿತ ಶಬ್ದಗಳಿಂದ ಹೇಳಿರುವ ಕವಿಯನ್ನು ಅಭಿನಂದಿಸಲೇಬೇಕು.
ಪೀರ್ ಭಾಷಾ ಅವರ ಕವಿತೆ ಇಲ್ಲಿದೆ:

ಇಲ್ಲ
ನನಗೆ ನಿಷ್ಠೆ ಇಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ
ಹುಸಿ ರಾಷ್ಟ್ರೀಯತೆಯ ಮತೀಯ ವ್ಯಾಖ್ಯಾನಕ್ಕೆ
ಆಳುವುದಕ್ಕಾಗಿಯೆ ಕಟ್ಟಿಕೊಂಡ ರಾಷ್ಟ್ರಕ್ಕೆ
ಪ್ರಜೆಗಳ ಹೆಸರಿನ ಪ್ರಭುತ್ವದ ಗಣಿತಕ್ಕೆ
ನಿಷ್ಠೆಯಿಲ್ಲ ನನಗೆ ಖಂಡಿತ. ಬದ್ಧನಲ್ಲ ನಾನು
ಶಬ್ದಗಳನ್ನೆ ಶಸ್ತ್ರವನ್ನಾಗಿಸಿಕೊಂಡವರು
ದ್ರೋಹಿ ಎಂದರೂ ನನಗೆ ಅಳುಕಿಲ್ಲ
ಇಲ್ಲ, ನನಗೆ ರಾಷ್ಟ್ರವಿಲ್ಲ, ಭಾಷೆಯಿಲ್ಲ
ತಥಾಕಥಿತ ಧರ್ಮವಿಲ್ಲ.

ಈ ನೆಲವೇ ನನ್ನ ಸೃಷ್ಟಿಯ ಮೂಲ
ಈ ನೆಲವೇ ನನ್ನ ಅನ್ನದ ಮೂಲ
ಈ ನೆಲಕ್ಕೇ ನನ್ನ ಬದುಕು ಅರ್ಪಿತ
ಈ ನೆಲಕ್ಕೇ ನನ್ನ ಸಾವೂ ಬದ್ಧ
ಈ ಅಖಂಡ ನೆಲವೇ ನನ್ನ ತಾಯಿ
ಈ ಅಖಂಡ ನೆಲವೇ ನನ್ನ ಮಾತೃಭೂಮಿ

ನನ್ನ ತಾಯಿ ಶುಭ್ರಜೋತ್ಸಾನ ಪುಲಕಿತ ಯಾಮಿನಿ ಅಲ್ಲ
ಸದಾವತ್ಸಲೇ…ಎಂದು ನಮಿಸುವ ನಟನೆ ನನಗೆ ಬೇಕಿಲ್ಲ
ನನ್ನ ನಾಡಿನ ಪರ್ವತಗಳನ್ನು
ತಾಯಿ ಮೊಲೆಗಳಿಗೆ ಹೋಲಿಸುವ
ತಾಯ್ಗಂಡ ಭಕ್ತಿ ಬೇಡ ನನಗೆ
ಹೌದು, ನಾನು ಈ ನೆಲದ ಜೀವ
ಅಖಂಡ ನೆಲವೇ ನನ್ನ ಮಾತೃಭೂಮಿ

ಸೀತೆ ನನ್ನಕ್ಕ, ಬಸವ ನನ್ನಣ್ಣ
ಶಂಭೂಕ ನನ್ನ ಬಂಧು
ಬುದ್ಧ ಮಾರ್ಗದರ್ಶಕ ದತ್ತ ನನ್ನ ಮಿತ್ರ
ತುತ್ತಿನ ತತ್ವ ಶಾಸ್ತ್ರ ನನ್ನ ಸಿದ್ಧಾಂತ
ನೈಲ್, ಆಫ್ರಿಕಾ, ದ್ರಾವಿಡಗಳಲ್ಲಿ ನನ್ನ ಕುಲಮೂಲ
ಪ್ಯಾಲೆಸ್ಪೈನಿನ ವಿಧವೆ, ರುಮೇನಿಯಾದ ಚೆಲುವೆ
ಗ್ರೀಕಿನ ಕೂಲಿ, ಫ್ರಾನ್ಸಿನ ಝಾಡಮಾಲಿ
ಚೀನಾದ ರೈತ, ಕ್ಯೂಬಾದ ಯೋಧ, ಅಫಘಾನ ಅನಾಥ
ಎಲ್ಲ, ನನ್ನ ಸಂಬಂಧಿಗಳು

ನಾನು ಈ ನೆಲದ ಸೃಷ್ಟಿ
ಅಖಂಡ ಭೂಮಂಡಲವೇ ನನ್ನ ಮನೆ
ಇಂದ್ರಪ್ರಸ್ಥ ಅಯೋಧ್ಯೆ ದಿಲ್ಲಿಗಳ
ಹತ್ಯಾರಕ್ಕೆ ಸಿಕ್ಕು ಹರಿದ ನೆತ್ತರ ವಂಶಸ್ಥ ನಾನು
ನನ್ನವರ ಕರುಳು ಬಗೆದ ರಾಜ ಖಡ್ಗಗಳ ಮೇಲೆಲ್ಲ
ಪ್ರತ್ಯಕ್ಷ ದೇವತಾ ಮುದ್ರೆಗಳು
ಹಿರೋಶಿಮಾ, ನಾಗಸಾಕಿ ಬಾಂಬುಗಳ ಮೇಲೆ ಶಾಂತಿ
ಮಂತ್ರಗಳು
ಇರಾಕ್, ವಿಯೆಟ್ನಾಂ ಯುದ್ಧ ವಿಮಾನಗಳ ಮೇಲೆ
ಪ್ರಜಾಪ್ರಭುತ್ವದ ಘೋಷಗಳು
ಹಿಟ್ಲರನ ಸಾವಿನ ಶಿಬಿರಗಳಲ್ಲಿ
ದೇಶಭಕ್ತಿಯ ಸಾರಗಳು
ಪಿತೃ ಭೂ ಪುಣ್ಯಭೂಮಿಯ ಹೆಂಡದಂಗಡಿಗಳಿಗೆ
ಧರ್ಮದ ಬೋರ್ಡುಗಳು
ಕೊಲೆಗಡುಕರ ಹಣೆ ಮೇಲೆ
ಸಂಸ್ಕೃತಿಯ ಸಂಕೇತಗಳು
ಅತ್ಯಾಚಾರಿಗಳ ಬಾಯಲ್ಲೇಕೆ ಮಾತೃವಂದನೆ ಗೀತೆ
ಎಂದು ಯಾರಿಗೆ ಕೇಳಬೇಕು ನಾನು

ಲೂಟಿಕೋರರ ಕೈಯಲ್ಲಿ
ದೇಶದ ನಕಾಶೆ ನೇತಾಡುತ್ತಿದೆ
ದಲ್ಲಾಳಿಯಂಗಡಿಯಾದ ಸಂಸತ್ತಿನಲ್ಲಿ
ಸ್ವಾತಂತ್ರ್ಯದ ಹರಾಜಿಗೆ ಟೆಂಡರ್ ಕರೆಯಲಾಗಿದೆ
ನಾನು ಈ ಲೋಕದ ಪ್ರಜೆ
ತುಳಿವ ಕಾಲುಗಳೆಲ್ಲ ನನ್ನ ಕೊರಳ ಮೇಲೆ ಇವೆ.
ಇಲ್ಲ. ನನಗೆ ನಿಷ್ಠೆಯಿಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ ಹುಸಿ ರಾಷ್ಟ್ರೀಯತೆಗೆ
ಪ್ರಜೆಗಳನ್ನು ಸತ್ರೋಳಿಗಳನ್ನಾಗಿಸಿದ ಪ್ರಭುತ್ವಕ್ಕೆ.
                     
                         -ಬಿ.ಪೀರ್ ಭಾಷ